Wednesday 30 November 2011

ಕನಸುಗಳ ನಾವಿಕ

ಜೀವನ ಅರ್ಥವಿಲ್ಲದ್ದು ನೀ ಸಿಗುವವರೆಗೂ... ನೀ ಬದುಕಲು ಕಾರಣ ಕೊಟ್ಟೆ...
ಕೆಲವೊಮ್ಮೆ ನಿನ್ನ ಮಾತು ಸಮ್ಮೋಹನಗೊಳಿಸತ್ತೆ. ಒಂಥರಾ intoxication ಅಂತಾರಲ್ಲ, ಹಾಗೆ...

ನೀ ಇಲ್ಲದೆಯೂ ನೀ ಇರುವೆಯೆಂಬ ಅನುಭವ... ನಿನ್ನದೇ ಗುಂಗು... ನನ್ನನ್ನೇ ಕಳೆದುಕೊಂಡ ಹಾಗೆ... ನಿನ್ನ ನೋಡಿದರೆ ಉತ್ಸಾಹ, ಉಲ್ಲಾಸ ಎಲ್ಲಾ ತಾನಾಗೇ ಬರುತ್ತೆ...
ಇದೆಂಥ attachment ಅಂತ ಗೊತ್ತಿಲ್ಲ... ಅಕ್ಕರೆಯೋ, ಆತ್ಮೀಯತೆಯೋ, ಮೆಚ್ಚುಗೆಯೋ... ಆದರೆ ನೀ ಬೇಕು...

ಆದರೂ ವಾಸ್ತವ ತಿಳಿದಿದೆ... ನನ್ನ ಪರಿಧಿಯ ಅರಿವಿದೆ... ಅದನ್ನು ಮೀರಿ ಎಂದೂ ಏನನ್ನೂ ಅಪೇಕ್ಷಿಸಲ್ಲ...
ಅತಿ ಆಸೆಯೂ ಇಲ್ಲ...

ನೀನಲ್ಲದೆ ಬೇರೇನೂ ಬೇಕಿಲ್ಲ,..

ಅದರ ಅವಶ್ಯಕತೆ ನನಗಿಲ್ಲ...

ನಿನ್ನ ಬಗ್ಗೆ ಯೋಚಿಸಿದಾಗ... ಎಲ್ಲವೂ ಸಿನೆಮಾ ರೀಲಿನ ಹಾಗೆ ಕಣ್ಮುಂದೆ ಬರುತ್ತೆ... Cannot accept, cannot deny… ಆದರೆ ಒಂದಂತೂ ಸತ್ಯ, ಒಮ್ಮೊಮ್ಮೆ ನಿನ್ನ ಮುಂದೆ ಕಳೆದುಹೋಗ್ತೀನಿ... ಶರಣಾಗತಿಯ ಸ್ಥಿತಿ ಅಂತಾರಲ್ಲ ಹಾಗೆ... ನೀ ಹೇಳಿದ ಹಾಗೆಲ್ಲ ಕೇಳ್ತೀನಿ. ಒಮ್ಮೊಮ್ಮೆ ನನಗೆ ಆಶ್ಚರ್ಯ, ಯಾಕೆ ನಿನ್ಮುಂದೆ ಕಳೆದುಹೋಗ್ತೀನಿ ಅಂತ...

ಎಲ್ಲೋ ಎಫ್.ಎಂ ನಲ್ಲಿ ಹಾಡು ಕೇಳ್ತಿದ್ದೆ, One line ತುಂಬಾ ಇಷ್ಟ ಆಯ್ತು... ನೆನಪಿನಲ್ಲೆ ನೀನೀಗ ಎಂದಿಗಿಂತ ಸನಿಹ’… ಎಷ್ಟು ಚೆನ್ನಾಗಿದೆ ಅಲ್ವಾ... ಮತ್ತೆ ಎಷ್ಟು ಅರ್ಥಪೂರ್ಣವಾಗಿದೆ ಅಲ್ವಾ... ನೆನಪುಗಳು ತುಂಬಾ ಹಿತವಾಗಿರತ್ತೆ... ಮನಸ್ಸಿಗೆ ಆಹ್ಲಾದ ಕೊಡುತ್ತೆ... ಜೀವನದ ಅತ್ಯಂತ ಸುಂದರವಾದ ಕ್ಷಣಗಳು... ಅಪರೂಪವಾದವು... ಒಮ್ಮೊಮ್ಮೆ ಭಯ ಆಗತ್ತೆ ಎಲ್ಲಿ ನಿನ್ನ ಕಳೆದುಕೊಳ್ತೀನೋ ಅಂತ... ನೀನು ನನ್ನಿಂದ ದೂರಾಗ್ತೀಯಾ ಅನ್ನೋ ಕಲ್ಪನೆನೆ ಆಘಾತ ನಂಗೆ... ಉಸಿರು ನಿಂತ ಹಾಗೆ... ಈ ಅನುಭವವೆಲ್ಲಾ ಹೊಸದು... ನಿನ್ನೊಂದಿಗಿದ್ದರೆ  ಇದೆಲ್ಲಾ ನನ್ನ ಭ್ರಮೆ ಅನ್ಸತ್ತೆ... ನಿನ್ನ ನೆನಪಾದಾಗ ನಿನ್ನ ಧ್ವನಿ ಕೇಳಿದಂತಾಗುತ್ತೆ, I can smell you, I can feel you… ಕೆಲವೇ ಕೆಲವು ನೆನಪಿಸಿಕೊಳ್ಳಬಹುದಾದ ನೆನಪುಗಳಲ್ಲಿ ಮೊದಲು ನಿನ್ನ ನೆನಪುಗಳಿಗೇ ಸ್ಥಾನ...

ನಿನ್ನ ಸಮ್ಮೋಹಕ ನಗು...

ನಿನ್ನ ಮಧುರವಾದ ಧ್ವನಿ...

ನಿನ್ನ ಪ್ರಖರವಾದ ಕಣ್ಣೋಟ...

ನಿನ್ನ ಮಧುರವಾದ ಸ್ಪರ್ಶ...

ನಿನ್ನ ಬಿಸಿಯುಸಿರಿನ ಅನುಭವ...

ಎಲ್ಲವೂ ಮನಮೋಹಕ...

ಏನಂತಾ ಹೇಳಲಿ... ಕಲ್ಪನೆಗೂ ದೂರವಾದದ್ದು... ಭಾವನೆಗಳು criteria ಮೇಲೆ depend ಆಗಿರಲ್ಲ... ಮನುಷ್ಯನ interference ಗಿಂತ ದೂರವಾದದ್ದು... ನಾನೇ ನಾನಾಗಿಲ್ಲ... ಎಲ್ಲವೂ ನೀನೇ... ಎಲ್ಲೆಲ್ಲೂ ನೀನೇ... ಮನಸ್ಸಿನಲ್ಲೂ ನೀನೇ... ಕಣ್ಣಲ್ಲೂ ನೀನೇ... ನಿನ್ಮುಂದೆ ಅದೆಷ್ಟು ಕಳೆದು ಹೋಗ್ತೀನಿ ಅಂದರೆ ನನ್ನೆ ನಾ ಮರೆತುಬಿಡ್ತೀನಿ. ನಿನ್ನ ಕೈಲಿ ಬೊಂಬೆ ಥರ... ಸ್ವಲ್ಪ ಜಾಸ್ತಿನೇ ಅನ್ಸುತ್ತೆ, ಆದರೆ ನಾ ಏನು ಮಾಡಲಿ feelings cannot be explained, one should feel…  
ನಿನ್ನ ಬಗ್ಗೆ ಏಷ್ಟೇ ಹೇಳಿದರೂ ಹೇಳಬೇಕು ಅನ್ನಿಸ್ತಿದೆ... ನಿನಗೂ ಕೇಳಿ ಕೇಳಿ ತಲೆ ಚಿಟ್ಟು ಹಿಡಿಯುತ್ತೆ... ಏನಂತೀಯಾ... ಹೂ ಅಂತಿಯಾ... ಉಹು ಅಂತಿಯಾ... ಜೀವಂತಿಕೆ ಇಲ್ಲದ ಜೀವಕ್ಕೆ ಜೀವ ಕೊಟ್ಟವ ನೀನು...ರಾತ್ರಿ ಬರೀ ಕತ್ತಲೆ ಅನ್ಕೊಂಡಿದ್ದೆ, ಆದ್ರೆ ಕನಸು ಕೂಡ ಕಾಣಬಹುದು ಅಂತ ತಿಳಿಸಿಕೊಟ್ಟ ಕನಸುಗಳ ನಾವಿಕ... ಹೇಗೆ ಮರೆಯಲಿ ನಿನ್ನ, ಮರೆತು ಕೂಡ ಮರೆಯಲಾರೆ ನಾ ನಿನ್ನ...  


Sunday 27 November 2011

ನೆನಪುಗಳು


ಯಾಕೋ ಇವತ್ತು ನಿನ್ನ ನೆನಪು ತುಂಬಾ ಕಾಡ್ತಿದೆ. ಸಂತೋಷ, ದುಃಖ ಏನೇ ಆದ್ರೂ ಮೊದಲು ನೆನಪಾಗೋದು ನೀನೇ...  ಇದೊಂಥರ ನನ್ನ ಹುಚ್ಚಾಟಜೀವನ ಚೂಯಿಂಗ್ ಗಮ್ ಥರ, ರಸ ಇರಲ್ಲ, ರುಚಿ ಇಲ್ಲದೆ ತಿನ್ನೋ ಆಸಕ್ತಿ ಇಲ್ಲ, ಆದ್ರೆ ಮುಗಿಯೋದು ಇಲ್ಲ.... ಕಣ್ಮುಚ್ಚಿ ಕುಳಿತರೆ ನೆನಪುಗಳು ಕಾಡುತ್ತವೆ, ಕಣ್ಣೀರಧಾರೆಯಾಗಿ... ಕಣ್ಣುಗಳಲ್ಲಿರುವ ನಿನ್ನ ಬಿಂಬವಾದರೂ ಜೊತೆಯಿರಲಿ ಅಂತ ಕಣ್ಣೀರು ಹೊರಬರದಂತೆ ತಡೆಯುತ್ತೇನೆ. ಆಕಾಶ ನೋಡುತ್ತಾ ಕುಳಿತರೆ ಅಲ್ಲೂ ಜೀವಂತಿಕೆ ಕಾಣಲ್ಲ. ಯಾಕೆ ಹೀಗೆ ಕಾಡುತ್ತವೆ ನೆನಪುಗಳು...  ಹಲವು ಬಾರಿ ಅನ್ನಿಸಿದೆ ನೀನೊಂದು ಮರೀಚೀಕೆ ಎಂದು... ನಿನ್ನ ಬಗ್ಗೆ ಕನಸು ಕಾಣೋದು ಒಂದು ಸುಂದರ ಅನುಭವ... ಅನಂತದವರೆಗೂ ಕನಸು ಕಾಣುವೆ..ನಿನ್ನ ನೋಡಲು ಆಸೆ ಇದೆ ಆದರೆ ಕಣ್ಬಿಟ್ಟರೆ ಕಾಣೋದು ನೀನಿಲ್ಲದ ಜಗತ್ತು .... ಅದಕ್ಕೆ ಮತ್ತಷ್ಟು ಗಟ್ಟಿಯಾಗಿ ರೆಪ್ಪೆ ಮುಚ್ಚಿಕೊಳ್ಳುತ್ತೇನೆ... ಸ್ವಲ್ಪವು ಮಿಸುಕಾಡದಂತೆ... ಅದೇನೋ ಸೆಳೆತ... ಮತ್ತೆ ಕಣ್ತುಂಬಿ ಬಂದು ಹನಿಯಾಗಿ ಜಾರಿ ಹೋಗುತ್ತದೆ...
ನೀನಿಲ್ಲದೆ... ನನಗೇನಿದೇ....
ಕನಸೆಲ್ಲಾ ನಿನ್ನಲ್ಲೇ... ಸೆರೆಯಾಗಿದೆ...
ಮನಸೆಲ್ಲಾ ನಿನ್ನಲ್ಲೇ.... ಕಣ್ಣಾಗಿದೆ...

ಯಾಕೊ ಈಗೀಗ ಜೀವನ ಅತಂತ್ರ ಅನ್ನಿಸ್ತಿದೆ... office ನಲ್ಲಿರೋ ಅಷ್ಟು ಸಮಯ ಹೇಗೋ ಕಳೆದು ಹೋಗತ್ತೆ... ನಂತರದ ಸಮಯ ಇದ್ಯಲ್ಲಾ... ಭಯಂಕರ ಕಾಡುತ್ತೆ... ಒಮ್ಮೊಮ್ಮೆ ನೀ ಬರ್ತೀಯ... ಸ್ವಲ್ಪ ಸಮಯ ಖುಷಿಯಾಗಿ ಕಳೆಯುತ್ತೆ... ಒಮ್ಮೊಮ್ಮೆ ನಾನು over dependent ಆಗಿದಿನೇನೋ ಅನ್ಸತ್ತೆ. ನನ್ನ dependency ನಿನ್ಮುಂದೆ ತೋರುಸ್ಕೋ ಬಾರದು ಅಂತ ತುಂಬಾ ಪ್ರಯತ್ನ ಪಡ್ತೀನಿ, ಆದ್ರೂ ನನ್ನ ಕೈ ಮೀರಿ ನಿನ್ಮುಂದೆ ಕಳೆದು ಹೋಗ್ತೀನಿ. ಬಹುಶಃ ನಿನಗೆ ಸಮ್ಮೋಹನ ಮಾಡೋಕ್ಕೆ ಬರುತ್ತೆ ಅನ್ಸುತ್ತೆ, ಅದಕ್ಕೇ ಹೀಗೆ...
ನಿನ್ನ ನಗುವು ಹೂವಂತೆ, ನಿನ್ನ ನುಡಿಯು ಹಾಡಂತೆ...
ಬದುಕಿನ ಅನುಕ್ಷಣ ನನಗೆ ಸಂತೋಷವೇ...


ಬಹುಶಃ ನೀನೂ ಇಲ್ಲದಿದ್ದರೆ ಏನಾಗ್ತಿದ್ನೋ... ಒಂಟಿಯಾಗಿದ್ದರೆ ಅನುಭವಿಸಿದ ಅವಮಾನ, ನೋವುಗಳೇ ನೆನಪಾಗುತ್ತೆ... ಯಾರ ಮೇಲೂ ನಂಬಿಕೆ ಬರಲ್ಲ. ನನ್ಮೇಲೇ ನಂಗೆ ಸಿಟ್ಟು ಕೋಪ ಬರತ್ತೆ. ಆಗ ನೆನಪಾಗತ್ತೆ ನೀನು ಹೇಳ್ತಿರ್ತೀಯಲ್ಲ ಆ ಮಾತು, ಇಂಥ ಬಾಳು ಬಾಳಬೇಕಾ?’ ಅಂತ. ಆದ್ರೂ ಸಾಯೋ ಮನಸ್ಸಿಲ್ಲ... ಬದುಕೋ ಆಸೆ ಇಲ್ಲ. 

ಈ ಹಾಡು ಕೇಳೀದೀರಾ... ಎಷ್ಟು ಆಪ್ತ ಅನ್ನಿಸುತ್ತೆ ಗೊತ್ತಾ...

ಬಾನಿನಲ್ಲಿ ಒಂಟಿ ತಾರೆಸೋನೆ ಸುರಿವ ಇರುಳ ಮೋರೆ...
ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ...
ಎಲ್ಲಿ ಜಾರಿತೋ ಮನವು... ಎಲ್ಲೆ ಮೀರಿತೋ...


ಈ ಸಾಲುಗಳನ್ನ ಕೇಳಿದಾಗನನಗೂ ಬಿಕ್ಕುವಿಕೆಯ ಆನುಭವ... ಆದರೆ ಆ ಬಿಕ್ಕಳಿಕೆಯ ಸದ್ದು ಯಾರಿಗೂ ಕೇಳುವುದಿಲ್ಲ...  ನಿಜ ಹೇಳಲಾ... ಬೇಸರ ಆದಾಗೆಲ್ಲಾ ನೆನಪಾಗೋದು ನೀನು... ಆಗೆಲ್ಲಾ ಏನೂ, ನೀನು ಯಾವಾಗ್ಲೂ ನೆನಪಾಗ್ತಿಯಾ... ಇನ್ಯಾವತ್ತೂ ಅಳಬಾರದು ಅಂತ ಅನ್ಕೋತೀನಿ. ನಿನ್ನೊಂದಿಗಿದ್ದರೆ ನನ್ನ ನೋವುಗಳೆಲ್ಲ ಕರಗಿ, ಜಗತ್ತಿನಲ್ಲಿ ಅತ್ಯಂತ ಸಂತೋಷದಿಂದಿರೋ ವ್ಯಕ್ತಿ ನಾನೇ ಅನ್ಸತ್ತೆ. ನಿದ್ದೆಯ ಮಂಪರಿನಲ್ಲಿ ನಿನ್ನುಸಿರಿನ ಅನುಭವ, ನಿನ್ನ ಸುವಾಸನೆಯ ಸಮ್ಮೋಹನ. ಬೇರೊಂದು ಪ್ರಪಂಚದ ಅನುಭವ...  ಬಹುಶಃ ಜೀವನ ಅಂದರೆ ಏನು ಅಂತ ಯಾರಾದ್ರೂ ಪ್ರಶ್ನೆ ಮಾಡಿದರೆ ನಿನ್ನ ಹೆಸರು ಹೇಳ್ತೀನಿ ಅನ್ಸತ್ತೆ... ನೀನೇ ನನಗೆ ಜೀವನದ ಸಮಾನಾರ್ಥಕ ಪದ.
ಯಾಂತ್ರಿಕವಾದ ಈ ಪ್ರಪಂಚದಲ್ಲಿ ಯಾರೂ ಯಾರಿಗೂ ಆಪ್ತರಲ್ಲ... ಎಲ್ಲವೂ business… loss ಮತ್ತು profitಗಳ calculation… ಅಂಥ ಈ ಪ್ರಪಂಚದಲ್ಲಿ ಯಾರ ಹಂಗೂ ಇಲ್ಲದೆ, ಯಾರ ಒಡನಾಟವೂ ಇಲ್ಲದೆ ಬದುಕುತ್ತಿರುವಾಗ, ಎಲ್ಲಿಂದ ಬಂದೆಯೋ ನೀನು ಧುತ್ತೆಂದು... ನನ್ನ ಖಿನ್ನತೆಗೆ ಔಷಧಿ... ನಿನ್ನ ಮಾತೇ ನನಗೆ ಹುರುಪು... ಒಂಟಿತನಕ್ಕೆ ಜೊತೆಯಾದದ್ದು ನಿನ್ನ ನೆನಪು, ನಿನ್ನ ಒಡನಾಟ... ನೀನಿದ್ದರೆ ಏನಾದರೂ ಸಾಧಿಸುತ್ತೇನೆ ಎನ್ನುವ ಧೈರ್ಯ...  ಜಾಸ್ತಿ ನಿನಗೆ depend ಆಗಬಾರದು ಅಂತ ನಿನ್ನ ಮರೆಯಬೇಕು ಅನ್ನಿಸಿದರೂ, ಮತ್ತೆ ಮತ್ತೆ ನಿನ್ನ ನೆನಪುಗಳು ಕಾಡುತ್ತವೆ... ಇದೊಂದು ಥರ ಹುಚ್ಚುತನವಾ, ಅಸಹಾಯಕತೆಯ ರೂಪವಾ? ನಾನು ಅಂದೇ ಹೇಳಿದ್ದೆ ಹುಚ್ಚು ಕೋಡಿ ಮನಸು ಅಂತ. ನನಗನ್ನಿಸೋದು ಇದೊಂದು ಆರಾಧನೆ ಅಂತ... ಇದರಲ್ಲಿ ಯಾವುದೇ ಸ್ವಾರ್ಥ ಇಲ್ಲ...  ಇದೇ ನನ್ನ ಬದುಕೂ ಸಹ... ಪ್ರೀತಿ, ವಿಶ್ವಾಸ, ಆತ್ಮೀಯತೆ ಮನಸ್ಸಿಂದ ಬರೋದು, ಇದು ಆಕರ್ಷಣೆ ಅಲ್ಲ... ಕ್ಷಣಿಕ ಅಲ್ಲ...  ಇದು ನಿರಂತರ... ಜೀವನದ ಕಡೆಯವರೆಗೂ... ನಿನ್ನ ಭರವಸೆಯೇ ನನ್ನ ಬದುಕು ಅಲ್ವಾ...

ನೀ ಯಾರೋ ಏನೋ ಸಖ ನನಗಾಸರೆ, ಕರುಣಾಳು ನೀನಾದೆಯಾ ನನ್ನಾಸೆರೆ.

ನದೀ ತೀರದಲ್ಲಿ ಸ್ವಲ್ಪ ಸಮಯ ನಡೆದಾಡುವ ಆಸೆ... ಆಸೆಗಳೆಲ್ಲ ಕೈಗೂಡಲ್ಲ ಅಲ್ವಾ... ನನ್ನ ಭಾವನೆಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಏನೇನೋ ಅನ್ಸತ್ತೆ... ಹೀಗೆ ಅನ್ಕೊಳೋದು ಸರಿನೋ ತಪ್ಪೋ ಗೊತ್ತಿಲ್ಲ... ಗೊತ್ತು ಮಾಡ್ಕೊಳೋ ಆಸಕ್ತಿನೂ ಇಲ್ಲ... ನಿನ್ನೊಂದಿಗಿನ ನನ್ನ ಭಾವನೆಗಳು ನನಗೆ ಇಷ್ಟ, ಅಷ್ಟು ಸಾಕು ಅಲ್ವಾ?  ಏನಂತೀಯಾ... ಸ್ವಲ್ಪ ಜಾಸ್ತಿ ಆಯ್ತು ಅಂತೀಯಾ... ಏನ್ಮಾಡಲಿ... ಬಚ್ಚಿಟ್ಟ, ಮುಚ್ಚಿಟ್ಟ ಜೀವನ ಪೂರ್ತಿಯ ಭಾವನೆಗಳು ಬಹುಶಃ ನಿನಗಾಗಿ ಆಚೆ ಬರ್ತಿರ್ಬೇಕು... ಅದಕ್ಕೆ ಸ್ವಲ್ಪ ಜಾಸ್ತಿ, ಯಾಕಂದರೆ ಭಾವನೆಗಳನ್ನು ಹಂಚಿಕೊಳ್ಳೋಕೆ ಬೇರೆ ಯಾರು ಇಲ್ವಲ್ಲ...

ನಿನ್ನ ಮಾತು ನನ್ನಂಥ ಸೋತ ಹೆಜ್ಜೆಗಳಿಗೆ ಸ್ಪೂರ್ತಿ... ನಿನ್ನಿಂದ ಹೊಸ ಕನಸುಗಳಿಗೆ ಆಹ್ವಾನ... ಒಮ್ಮೊಮ್ಮೆ ಇದೆಲ್ಲಾ ಸುಳ್ಳೇನೋ ಅನ್ನಿಸತ್ತೆ... ಬಹುಶಃ ಇದೆಲ್ಲಾ ನನ್ನ ಭ್ರಮೆ ಇರಬಹುದು... ತಪ್ಪಿದ್ದರೆ ಕ್ಷಮೆ ಇರಲಿ. ನನ್ನಿಂದ ನಿನಗೆ ಯಾವ ತೊಂದರೆಯೂ ಆಗದು, ಇದಂತೂ ಸತ್ಯ...

ನೀನೆಂದರೆ ನನ್ನ ಮಾತು, ನನ್ನ ಮೌನ,
ನನ್ನ ಬರೆಯುವ ಪದಗಳೆಲ್ಲಾ ನೀನೇ...
ನನ್ನ ಕನಸುಗಳೂ ನೀನೇ...
ನೀನೆಂದರೆ ಬೆಳಕು, ನೀನೆಂದರೆ ಬದುಕು...
ನೀನೆಂದರೆ ಮುನಿಸು, ನೀನೆಂದರೆ ಕನಸು...

ಇಂತಹ ಭಾವನೆಗಳು ಬಹುಶಃ ನಿನಗೆ ನಗು ತರಿಸುತ್ತೆ... ಜೋಕ್ ಅನ್ನಿಸುತ್ತೆ ಅಲ್ವಾ... ಆದ್ರೂ ನನ್ನ ಉತ್ತರ ಒಂದೇ... ನನ್ನ ಭಾವನೆಗಳು ನಾ ಬದುಕಿರುವಷ್ಟೇ ಸತ್ಯ... ಉಸಿರಿಗೆ ಜೀವ ತುಂಬಿದವ ನೀನೆ... ನಾನು ಬರೆಯುವುದೆಲ್ಲ ನೋವಿನಿಂದ, ನಿರಾಸೆಯಿಂದ ಬರೆದದ್ದಲ್ಲ... ನಿನ್ನ ನೆನಪಿನಿಂದ ಬರೆದದ್ದು...  ನಿನ್ನ ನೆನಪು ನೋವು ನಿರಾಸೆಗಳನ್ನು ಮೀರಿದ್ದು... ಅದೊಂದು ಭರವಸೆ... ಅಂತರಂಗದ ಮಿಡಿತ...
ನೆನಪಿನ ನಾವಿಕ ನೀನಾದರೆ... ನೆನಪುಗಳು ಮಧುರ...
ನೆನಪುಗಳು ಸುಂದರ.. ನೆನಪುಗಳು ಸುಮಧುರ...


Friday 25 November 2011

ನಿನ್ನ ಛಾಯೆ


ಕಣ್ಮುಚ್ಚಿ ನೆನಪಿನಾಳಕ್ಕಿಳಿದಾಗ...
ಕಾಣುವುದೆಲ್ಲ ನಿನ್ನ ಛಾಯೆ... 
ನಿನ್ನ ಜೊತೆಗಿನ ಸಂಭ್ರಮದ ಕ್ಷಣಗಳ ಕಚಗುಳಿ...
ನಿನ್ನದೇ ನೆನಪುಗಳ ಮೆರವಣಿಗೆ...
ನಿನ್ನ ಕೋಪ... ಮುನಿಸುಗಳ ತಳಮಳ...
ಒಮ್ಮೊಮ್ಮೆ ಭಯವಾದಾಗ ನಿನ್ನ ಧ್ವನಿ ಕೇಳುವ ತವಕ...
ಹುಣ್ಣಿಮೆಯ ಚಂದ್ರನನ್ನು ನೋಡಿದಾಗ.. ನಿನ್ನದೇ ನಗೆಯ ನೆನಪು...
ರಾತ್ರಿಯಲ್ಲಿ ಹೆದರಿ ಭಯದಿಂದಾಗಿ
ತಡಕಾಡುವುದು ನಿನ್ನ ಆಸರೆಗಾಗಿ...
ಒಮ್ಮೊಮ್ಮೆ ಕನಸಲ್ಲೂ ನಿನ್ನ ಕಂಡಾಗ
ಎಚ್ಚರಗೊಂಡು ಏಳಲೇ ಬಾರದು ಅನಿಸುತ್ತೆ...
ನೀ ಬಯ್ದಾಗ ಬೇಸರದಿಂದ ನಾನಿಲ್ಲಿ ಕಣ್ಣೀರಿಟ್ಟ ಕ್ಷಣಗಳು ಲೆಕ್ಕವಿಲ್ಲ...
ಬಚ್ಚಿಟ್ಟ ಭಾವನೆಗಳು ಹಲವಾರು...
ಹೇಳದೇ ಮುಚ್ಚಿಟ್ಟಿರುವ ನೆನಪುಗಳು ಸಹಸ್ರಾರು...
ಮನಸ್ಸಿನ ಹುಚ್ಚು ಕೋಡಿಯಲ್ಲಿ ಕೊಚ್ಚಿ ಹೋಗುವುದೇನೋ...  
ಯಾಕೋ ಗೆಳೆಯ ಇಷ್ಟೊಂದು ಹತ್ತಿರವಾದೆ
ಯಾರೂ ಬೇಡವೆಂದು ಒಂಟಿಯಾಗಿದ್ದ ನನಗೆ...
ಮೌನದ ಜೊತೆ ಸ್ನೇಹ... ಏಕಾಂಗಿತನ...
ನಿನ್ನ ಸಹವಾಸದ ಪ್ರಭಾವ ಹೇಗಾಯಿತೋ ತಿಳಿಯೆ...
ನಾ ನಗಲು ಕಲಿತೆ... ಮನಸ್ಸಿನ ಅನುಭವ...
ಯಾಕಾಗಿ ನನ್ನ ಮೇಲೆ ಕೋಪ...
ನಾನು ನೋಡಿದಾಗ ಸ್ವಲ್ಪ ನಗು,
ಜೊತೆಗೆ ಸ್ವಲ್ಪ ಮನ ಬಿಚ್ಚಿ ಮಾತನಾಡ ಬಾರದೆ?

Thursday 24 November 2011

ನೀವಿಲ್ಲದೇ


ಆ ಸಮಯ, ಅಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡು ಒಂಟಿಯಾಗಿದ್ದೆ. ಬದುಕಿನ ಪುಟಗಳಲ್ಲಿ ಬಣ್ಣಗಳ ಬದಲು ಕೇವಲ ಮಣ್ಣು ತುಂಬಿದೆ ನನ್ನ ಅದೃಷ್ಟ. ಮುಂದೇನು ಅನ್ನುವ ಪ್ರಶ್ನೆಯನ್ನ ನನಗೆ ನಾನೆ ಹಾಕಿಕೊಳ್ತಿದ್ದೆ. ಹೀಗೆ ನನ್ನದೇ ಲೋಕದಲ್ಲಿದ್ದ ನನ್ನನ್ನ ಬೇರೊಂದು ಪ್ರಪಂಚಕ್ಕೆ ಕರೆದೊಯ್ತು ನಿಮ್ಮ ಸಹವಾಸ.  ನಾನು ಬರೆಯೋದನ್ನ ಓದಿ ನಗು ಬಂದರೆ ಜೋರಾಗಿ ನಕ್ಕು ಬಿಡಿ. ಆದರೆ ಪ್ಲೀಸ್ ಬಯ್ಬೇಡಿ. ನೀವು ಬಯ್ದರೆ ಅಳು ಬರುತ್ತೆ. ಅದು ಡೇಂಜರಸ್.  ಅದು ನನ್ನ ತುಂಬಾನೇ ಡಿಪ್ರೆಸ್ ಮಾಡತ್ತೆ. ಡಿಪ್ರೆಸ್ ಅನ್ನೊದು ಸಾವಿನ ದೀಪ ಹಿಡಿದು ಸ್ವಾಗತ ಮಾಡಿದ ಹಾಗೆ. ಕ್ಷಮಿಸಿ ಇದನ್ನೆಲ್ಲ ಹೇಳಬಾರದು. ಆದರೆ ಸಾವಿರ ಸರ್ತಿ ನನಗೆ ಹೀಗೇ ಅನ್ಸುತ್ತೆ ನೀವು ಬಯ್ದಾಗ... ಮತ್ತದೇ ಜೀವನ... ಮತ್ತೆ ನೀವು ನಾರ್ಮಲ್ ಆಗ್ತೀರ... ಮತ್ತದೇ ಕನಸುಗಳು ಶುರು ಆಗತ್ತೆ...  ಆಗ ಗೆಲ್ಲೋದಕ್ಕೆ ಕನಸು ಕಟ್ಟೋದಕ್ಕೆ ಶುರುಮಾಡ್ತೀನಿ. ದಾರಿ ತಪ್ಪದೆ, ಗುರಿ ಮುಟ್ಟುವ ನಿರೀಕ್ಷೆಯಲ್ಲಿ... ನೀವು ಜೊತೆಯಿದ್ದರೆ ನಾ ಗುರಿ ಮುಟ್ಟುವ ಹಾದಿಯಲ್ಲಿ  ಬೆಳಕು ಚೆಲ್ಲಿದ ಹಾಗೆ... ಆದರೆ ಹಾಗಂತ ಹೇಳಿದರೆ neon light? ಅಂತ ಕೇಳ್ತೀರಾ... 

ಮುಂಚೆ ನಾನು ಬರೀ ಉಸಿರಾಡ್ತಿದ್ದೆ, ಈಗ ನಾನು ಕೂಡ ಬದುಕಿದ್ದೀನಿ ಅನ್ನಿಸ್ತಿದೆ... ಮನಸ್ಸು ತುಂಬಾ ಸೂಕ್ಷ್ಮ ತುಂಬಾ ಬೇಗ ನೋವಾಗುತ್ತೆ.  ಒಮ್ಮೊಮ್ಮೆ  ನಿಮ್ಮ ನೆನಪಾಗುತ್ತೆ’ ಅಂತ ಬರೆದು ನಿಮ್ಮ ಬಗ್ಗೆ ಯೋಚಿಸ್ತಾ ಕೂತಿರ್ತೀನಿ. ಆಗಾಗ ಕನವರಿಕೆ, ಬಿಕ್ಕಳಿಕೆಯಲ್ಲೂ ನಿಮ್ಮ ನೆನಪು... ಕನಸು, ಮುನಿಸು, ಎಲ್ಲವೂ ನಿಮ್ಮ ಸುತ್ತಲೇ. ಆಸೆಯೂ ನೀವೇ, ದುಃಖವೂ ನೀವೇ... ಒಮ್ಮೊಮ್ಮೆ ಜೀವನ ಇಷ್ಟೇನಾ ಅನ್ಸತ್ತೆ... ಮತ್ತೊಮ್ಮೆ  ನಿಮ್ಮನ್ನ ನೋಡಿದರೆ ಜೀವನಕ್ಕೆ ಅರ್ಥ ಸಿಕ್ಕಂತೆ ಅನ್ನಿಸುತ್ತೆ. ಕಿಟಕಿ ಪಕ್ಕ ಕೂತು ತಲೆ ಮೇಲೆ ಆಕಾಶ ನೋಡಿದಾಗಲೆಲ್ಲ ನಿಮ್ಮದೇ ಮುಖ ಚಿತ್ರ ಕಣ್ಣ ಮುಂದೆ. ನೆನಪಾದಾಗಲೆಲ್ಲ ಕಷ್ಟ ಅನ್ಸತ್ತೆ. ನೀವು ಯಾಕೆ ಹೀಗೆ ನೆನಪಾಗಾಬೇಕುಇಷ್ಟು ವರ್ಷ ನೀವಿಲ್ಲದೇ ನಾನು ಬದುಕಿದ್ದೆನಾ,  ಹೌದಾ? ಅಂತ ನನ್ನೇ ನಾನು ಪ್ರಶ್ನೆ ಮಾಡಿಕೊಳ್ತೀನಿ. ಒಮ್ಮೊಮ್ಮೆ ಭಯ ಆಗುತ್ತೆ.  ನನ್ನ ಜೀವನದಲ್ಲಿ ನೀವಿಲ್ಲದಿರುವುದನ್ನು ಕಲ್ಪಿಸಿಕೊಂಡಕೆ ನಾನು ಎಷ್ಟು ವೀಕ್ ಅನ್ನಿಸಿಬಿಡ್ತೀನಿ. ಗೊತ್ತಾಒಂದು ವೇಳೆ ನೀವಿಲ್ಲದೇ ಹೋಗಿದ್ದರೆ ನನ್ನ ಬದುಕು ಎಷ್ಟು ಅಪೂರ್ಣಎಷ್ಟು ಖಾಲಿಎಷ್ಟು ನೀರಸವಾಗಿರುತಿತ್ತು ಅಲ್ವಾ...  ನೀವಿಲ್ಲದೇ’ ಎಂಬ ಸ್ಥಿತಿಯನ್ನು ಕಲ್ಪಿಸಿಕೊಳ್ಳಲೂ ಧೈರ್ಯವಾಗುತ್ತಿಲ್ಲ ನನಗೆ. ಯಾಕಿಷ್ಟು ನನ್ನೊಳಗೆ ತುಂಬಿ ಹೋಗಿದ್ದೀ ಹುಡುಗನನ್ನನ್ನೇ ನಾನು ಕಳೆದುಕೊಳ್ಳುತ್ತಿರುವಂತೆ ಇಷ್ಟಿಷ್ಟೇ ನನ್ನೊಳಗೆ ನೀವು ಆವರಿಸಿದ್ದೀರಾ. ನೀವಿಲ್ಲದೆ ಜೀವನ ಎಷ್ಟು ನಿರ್ಭಾವುಕ ಅನಿಸುತ್ತೆ. ನೀವಿಲ್ಲದೇ ಎಲ್ಲವೂ ಎಷ್ಟು ಯಾಂತ್ರಿಕ. ಎಲ್ಲಕ್ಕೂ ಜೀವ ತುಂಬುವ ಮಾಂತ್ರಿಕ ನೀವು. ನೀವಿಲ್ಲದೆ ಯಾಕೆ ಎಲ್ಲವೂ ಹೀಗೆ ಸಾಯುವಷ್ಟು ಬೇಸರವೆನಿಸುತ್ತಿದೆನೀವು ಬರಬಾರದೇಸದ್ದಾಗದೆ ಬಂದು ಬಾಗಿಲಲ್ಲಿ ನಿಲ್ಲಬಾರದೆನಾನು ಕನವರಿಸಿಕಣ್ರೆಪ್ಪೆ ತೆಗೆಯುವಷ್ಟರಲ್ಲಿ.

Sunday 20 November 2011

ಹುಚ್ಚು ಕೋಡಿ ಮನಸು


ಹುಚ್ಚು ಕೋಡಿ ಮನಸು, ಅದು ಹದಿನಾರರ ವಯಸು... ಅಂತ ಯಾರೋ ಕವಿ ಬರ್ದಿದಾರೆ... ಆದರೆ ನನ್ನ ಸ್ಥಿತಿ ನೋಡಿದರೆ, ಮನಸ್ಸು ಎಲ್ಲಾ ವಯಸ್ಸಲ್ಲೂ ಹುಚ್ಚು ಕೋಡಿನೇ ಪ್ರವಾಹ ಬಂದಾಗ... ವಯಸ್ಸಿನ ಲಿಮಿಟ್ ಇಲ್ಲ... ಯಾರಿಗೂ ಯಾವಾಗಲೂ ಕಾತರಿಸಿರದ ನಾನು, ನಿನಗಾಗಿ ಬಿಕ್ಕಳಿಸುತ್ತೇನೆ. ನೀ ಏನೇ ಅಂದರು, ಎಷ್ಟೇ ಬೇಜಾರಾದ್ರೂ ಅಡ್ಜಸ್ಟ್ ಮಾಡ್ಕೋತೀನಿ... ಯಾಕೆ ಅಂತ ಅರ್ಥ ಆಗ್ತಿಲ್ಲ...
ನಿನ್ನಿಂದ ಮನದ ಭಾವನೆಗಳಿಗೆ ಬಣ್ಣ ಹಚ್ಚುತ್ತಿದ್ದೇನೆ... ನೀ ನನಗೆ ಏನು ಅನ್ನೋದು ಗೊತ್ತಿಲ್ಲ, ಗೆಳೆಯ ಅನ್ಲಾ, ಅಲ್ಲ ಅನ್ಸುತ್ತೆ, ಆದ್ರೆ ಅದಕ್ಕಿಂತ ಮೇಲೆ ಅಲ್ವ... ಅಥವಾ ಇದೆಲ್ಲಾ ಪದಗಳಿಗಿಂತಲೂ ಎತ್ತರದಲ್ಲಿದೀಯಾ ಅನ್ಲಾ... ನಿನ್ನ ಕಂಡರೆ ಎಷ್ಟೊಂದು ಭಾವನೆಗಳು ಪುಟಿದೇಳುತ್ತೆ... ನಿನಗೆ ಹೇಳಲಿಕ್ಕೆ ಆಗಲ್ಲ, ಯಾಕೆಂದರೆ ಕೇಳಲು ನಿನಗೆ ವ್ಯವಧಾನವಿಲ್ಲ... ಬಹುಶಃ ಅದಕ್ಕಾಗಿಯೇ ಎಲ್ಲವನ್ನೂ ಈ ರೀತಿ ಹೇಳ್ತೀನಿ ಅನ್ಸತ್ತೆ. ನನ್ನ ಕಣ್ಣಲ್ಲಿ ಕನಸುಗಳು ಕಾಣಲು ನಿನ್ನ ಪದಗಳ ಸಾಕಾರ... ನಾ ಬರೆಯುವ ಪ್ರತಿಯೊಂದು ಪದದಲ್ಲೂ ನಿನ್ನದೇ ಪ್ರತಿಬಿಂಬ... ನಿನ್ನಿಂದ ನನ್ನ ನಾನೇ ಹುಡುಕಿ ಕೊಂಡೆ.
ಕನಸು ಪ್ರೀತಿಯ ಹೊರಪ್ರಪಂಚ, ಅಲ್ಲಿ ಮಿಡಿಯುವ ಭಾವನೆಗಳೇ ಬದುಕು ಅಂತಾರೆ, ಆದರೆ ಈ ಕಣ್ಣೀರಿದೆಯಲ್ಲ  ಅದರದು ಎರಡು ಮುಖ, ಒಂದು ಸಂತೋಷದ ಕಣ್ಣಬಿಂದುವಾದರೆ,  ಅದೇ ಕಣ್ಣ ಹನಿ ಒಮ್ಮೊಮ್ಮೆ ದುಃಖದ ಸಂಕೇತ. ನಿನಗಾಗಿ ಕಣ್ಣ ಹನಿ ಜಾರುತ್ತೆ, ಈಗ ನನ್ನ ಕಣ್ಣಿಂದ ಜಾರುವ ನಾಲ್ಕು ಹನಿಗಳು ಯಾಕೋ ಅರ್ಥ ಕಳೆದುಕೊಳ್ಳುತ್ತಿವೆ, ಈ ಬದುಕಿಗೆ ಒಂದು ಅರ್ಥ ತಂದವನೂ ನೀನೆ, ಅದಕ್ಕೊಂದು ಅರ್ಥವಿಲ್ಲದಂತೆ ಒಮ್ಮೊಮ್ಮೆ ವರ್ತಿಸಿ ಹಿಂಸಿಸುವವನೂ ನೀನೇ. ಪ್ರತಿ ಕ್ಷಣಗಳೂ ನಗುವಿನ, ಸಂತೋಷದ ಕುರಿತೇ ಮಾತನಾಡುತ್ತಿದ್ದ ನೀನು ಈಗೀಗ ಕೋಪಗೊಂಡು ಕಣ್ಣೀರ ಕಡಲಿಗೆ ಆಗಾಗ ನೂಕುತ್ತೀಯ... ಹಿಂದೆಲ್ಲ ನಿನ್ನೊಂದಿಗೆ ಮಾತಾಡಲು ಇರದ ಭಯ, ಈಗೀಗ ಸದಾ ಕಾಡುತ್ತೆ, ಯಾವಾಗ, ಯಾತಕ್ಕಾಗಿ ಕೋಪಗೊಳ್ಳುವೆ ಎಂದು ಭಯದಿಂದ... ಆದರೂ ನಿನ್ನ ಬಿಟ್ಟಿರಲು ಕಷ್ಟ ಅನ್ಸತ್ತೆ... ಯಾಕೋ ಗೊತ್ತಿಲ್ಲ...
ನನ್ನ ಪ್ರಪಂಚ ತುಂಬ ಚಿಕ್ಕದು. ಇಲ್ಲಿ ಅಮ್ಮ ಮತ್ತು ನಿನ್ನ ಅಸ್ತಿತ್ವ ಬಿಟ್ಟರೆ ಬೇರೆ ಅಂಥಾ ವಿಶೇಷಗಳಿಲ್ಲ. ಅಲ್ಲಲ್ಲ, ಬೇರೆ ವಿಶೇಷಗಳೇ ಇಲ್ಲ. ಯಾರ ಕಾಲ್ ಬಂದರೂ ನಿನ್ನದಿರಬಹುದೆಂಬ ನಿರೀಕ್ಷೆಯಿಂದಲೇ ಫೋನ್ ನೋಡ್ತೀನಿ... ನನ್ನೆಡೆಗೆ ಬರುವ ಎಲ್ಲಾ ಹೆಜ್ಜೆಯ ಸದ್ದಲ್ಲೂ ಸದಾ ನಿನ್ನ ಬಿಂಬ. ದಿನವಿಡೀ ಕಾದ ಮನವು ಸಂಜೆಯವರೆಗೂ ನಿನ್ನ ಕಾಣದಿದ್ದಾಗ ನೋಡದೇ ಇರಬಹುದಾದ ಭಯದಿಂದ ಕುಗ್ಗುತ್ತದೆ. ರಾತ್ರಿಯಲ್ಲಿ ಕಿಟಕಿಯ ಪಕ್ಕ ಕುಳಿತು ಬಾನು ಚುಕ್ಕಿ ನೋಡುತ್ತಿರುವಾಗ ನಿನ್ನ ಮುಖವೇ ಕಾಣಿಸುತ್ತದೆ... ಅಲ್ಲೂ ಕಾಯುವಿಕೆಯೇ ಕಣ್ಕುಕ್ಕುತ್ತದೆ.
ಒಮ್ಮೆ ಏನಾಯ್ತು ಗೊತ್ತಾ, ಬಹುಶಃ ಕೆಲ ತಿಂಗಳುಗಳ ಹಿಂದೆ, ಊರಿಂದ ಬರುವಾಗ, ಬಸ್ಸಿನಲ್ಲಿ ಯಾರನ್ನೋ ನೋಡಿ ನೀನಂತ ನಕ್ಕು, ಪಕ್ಕನೆ ನೀನಲ್ಲ, ಅದು ನನ್ನ ಊಹೆಯೆಂಬ ಅರಿವಾಗಿ ನನ್ನನ್ನೇ ನಾ ಬಯ್ದಿದ್ದೆ. ನಕ್ಕ ತಪ್ಪಿಗಾಗಿ ಬಸ್ಸಿಳಿಯುವ ವರೆಗೂ ಗಾಭರಿಯಿಂದಿದ್ದೆ. ಎಲ್ಲವೂ ನೀನೇ, ಎಲ್ಲೆಲ್ಲೂ ನೀನೇ... ಗೊತ್ತಿಲ್ಲದೇ, ಗೊತ್ತಿರದ ಕಾರಣಕ್ಕಾಗಿ ಕಾಯುತ್ತೇನೆ ನಿನಗಾಗಿ,,, ನಿಜ, ಈ ಜಗತ್ತಿನಲ್ಲಿ ಎಲ್ಲಾ ಕಾಯುತ್ತಿದ್ದಾರೆ, ಏನೋ ಒಂದಕ್ಕೆ. ವೈಟಿಂಗ್ ಫಾರ್ ಸಂಮ್ಧಿಂಗ್... ಆದರೆ ನಾ ಏತಕ್ಕೆ ಕಾಯ್ತಿದೀನಿ ಅಂತ ನಂಗೇ ಗೊತ್ತಿಲ್ಲ... ಆದರೂ ಕಾಯುವಿಕೆ ನಿರಂತರ... ಕೊನೆಗೆ ಕೆಲವರು ಸಾವಿಗೂ ಕಾಯ್ತಾರೆ, ಬಹುಶಃ ನಾನೂ ಹಾಗೇ ಅನ್ಸತ್ತೆ... ಜೀವನ ಸಾಕು ಅನ್ನಿಸ್ತಿದೆ. ಸುಸ್ತಾಗ್ತಿದೆ...

ನಿನ್ನ ಕಂಡರೆ ಎಷ್ಟಿಷ್ಟ ಅಂತ ನಿಂಗೊತ್ತಿಲ್ಲ. ನೀರೊಳಗೆ ಮುಳುಗಿರುವವನು ಉಸಿರು ಬಯಸುವಷ್ಟು ನಿನ್ನ ಇಷ್ಟಪಡ್ತಿದೀನಿ ಅನ್ನಿಸ್ತಿದೆ. ನಿನ್ನ ಇಷ್ಟಪಡುವುದು ನನ್ನ ಕನಸು ಅಲ್ಲ, ಬದುಕು! ನಿನ್ನ ಒಂದು ನಗುವಿಗೆ, ನಿನ್ನ ಸನಿಹಕ್ಕಾಗಿ ಕಾಯ್ತೀನಿ. ನಿನಗೋಸ್ಕರ ಏನ್ಬೇಕಾದ್ರೂ ಮಾಡ್ತೀನಿ, ನಂಗಿಷ್ಟ ಇಲ್ಲದಿದ್ರೂ ನಿಂಗೋಸ್ಕರ ನೀ ಏನೇ ಹೇಳಿದ್ರೂ...  ಇಂದೆಂಥ ಸಂಬಂಧ ಅಂತ ಒಮ್ಮೊಮ್ಮೆ ಅನ್ನಿಸತ್ತೆ... ಆದರೆ ಅದಕ್ಕೊಂದು ಹೆಸರು ಕೊಡ್ಬೇಕು ಅನ್ನೊ ಕಾತುರ ಏನಿಲ್ಲ... ಅದರ ಅವಶ್ಯಕತೆ ಕೂಡ ಇಲ್ಲ... ಹೆಸರಿಟ್ಟು ಕರೆಸಿಕೊಳ್ಳುವ ಸಂಬಂಧ ಬೇಕು ಅನ್ನೋ ಆಸೆ ಕೂಡ ಇಲ್ಲ. ನೀನಿದ್ದರೆ ಬೇರೇನೂ ಬೇಡ.
ನಿನ್ನಿಂದ ನಾ ಜಾಸ್ತಿ ಏನೂ ಬಯಸಲ್ಲ... ಮಾತಾಡ್ಲಿಕ್ಕೆ ಆಗ್ದೇ ಇದ್ರೆ ಕನಿಷ್ಠ ಒಂದು ಮಿಸ್ಡ್ ಕಾಲ್ ಸಾಕು. ಒಂದು ಪುಟ್ಟ ಗೆಳೆತನ ಸಾಕು. ನನ್ನೆಡೆಗಿನ ಒಂದಿಷ್ಟು ಕಾಳಜಿ, ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು...  ಇದೊಂದು ಸಹಾಯ ಮಾಡ್ತೀಯಾ ಅಲ್ವ?ಒಂದು ಪ್ರಶ್ನೆ ಮಾತ್ರ ಭೂತವಾಗಿ ನನ್ನೆದುರು ನಿಂತಿದೆ, ಕಾಡುತಿದೆ... ನೀನೇನಾದರೂ ದೂರ ಆದರೆ ಬಹುಶಃ ಅದನ್ನು ತಡ್ಕೊಳೋ ಶಕ್ತಿ ಖಂಡಿತ ಇಲ್ಲ... ಆದ್ರೆ ನಿನ್ನ ಮುಂದೆ ಏನೇ ಹೇಳಿದ್ರೂ ನನ್ನ ತಮಾಷೆ ಮಾಡ್ತೀಯಾ... ಇಲ್ಲ ಅಂದರೆ ಎಲ್ಲಿವರೆಗೆ ನಾನಿರ್ತೀನಿ ಜೊತೆಗೆ ಅಂತ ಬಯ್ತೀಯಾ... ಅದಕ್ಕೆ ಏನೂ ಹೇಳಲ್ಲ...  ಇರೋಷ್ಟು ದಿನ ಖುಷಿಯಾಗಿ ನಿಂಜೊತೆ ಇರ್ತೀನಿ... ಆಮೇಲೆ ಇದ್ದಿದ್ದೇ,... ಮತ್ತದೇ ಬೇಸರ... ಅದೇ ಏಕಾಂತ... ಜೊತೆಲಿರೋ ಸಮಯದಲ್ಲಿ ಕೂಡ ನಿನ್ನ ಮಿಸ್ ಮಾಡ್ಕೊಳೋಕೆ ಇಷ್ಟ ಇಲ್ಲ... ಆದರೂ ನಿನ್ನ ಮಿಸ್ ಮಾಡ್ಕೋತಿನಿ... 
ನಿನ್ನ ಮುಂದೆ ಇಲ್ಲಿಯವರೆಗೂ ಹೇಳಿರದ ಚಿಕ್ಕ ಚಿಕ್ಕ ವಿಷಯಗಳು ತುಂಬಾನೆ ಇವೆ. ಚಿಕ್ಕದಾದರೂ ಅದನ್ನು ನಿನ್ನೊಂದಿಗೆ ಹಂಚಿಕೊಳ್ಳೋದ್ರಲ್ಲಿ ತುಂಬ ಖುಷಿಯಿದೆ...
ನಿಜ ಹೇಳ್ತ ಇದ್ದೀನಿ ಕೆಲವೊಮ್ಮೆ ನಿನ್ನ ಹಣೆಗೊಂದು ಮುತ್ತು ಕೊಡಬೇಕೆನ್ನಿಸುತ್ತೆ. ಒಮ್ಮೊಮ್ಮೆ ನಿನ್ನನ್ನ ಗಟ್ಟಿಯಾಗಿ ತಬ್ಬಿಹಿಡಿದು ಜೋರಾಗಿ ಅಳಬೇಕು ಅನ್ನಿಸುತ್ತೆ... ಆದರೆ ಆಮೇಲೆ ಗೊತ್ತಾಗುತ್ತೆ, ಹಾಗೆ ಅನ್ಕೊಳೋದು ತಪ್ಪು, ನಿನ್ನ ಬಗ್ಗೆ ಹಾಗೆಲ್ಲ ಅನ್ಕೊಬಾರದು ಅಂತ.
ಹೇಳೋಕೆ ತುಂಬಾನೆ ಇದೆ. ಕೆಲವು ಕಾರಣಗಳು ನಿನಗೆ ಸಿಲ್ಲಿ ಅನ್ನಿಸಬಹುದು. ಆದರೇ ಕೇವಲ ಭಾವನೆಗಳಲ್ಲೆ ಬದುಕುವ ನನ್ನಂತವರ ಪಾಲಿಗೆ ಈ ಸಣ್ಣ ವಿಷಯಗಳು ಸಣ್ಣ ವಿಷಯಗಳೇನು ಅಲ್ಲ. ಹೀಗೆ ನಿನ್ನ ಬಗ್ಗೆ ಏನೇ ಬರೆದರೂ ಅದು ಯಾಕೋ ಇಷ್ಟದಲ್ಲೇ ಮುಕ್ತಾಯವಾಗುತ್ತದೆ. ಕೊನೆಕೊನೆಗೆ ಕಣ್ಣೀರಿನಿಂದ ತೊಯ್ದು ಅಕ್ಷರಗಳೇ ಕಾಣದಾಗುತ್ತವೆ. ಈ ಅಸಹಾಯಕತೆಗೆ ಏನನ್ನಲಿ? ನನಗೆ ನೀ ಯಾರು? ನಿನಗೋಸ್ಕರ ಯಾಕೆ ಮನಸ್ಸು ಹಂಬಲಿಸುತ್ತದೆ? ಅಥವಾ ಇದು ನನ್ನ ಅಸಹಾಯಕತೆಯಾ? ಈ ಅಸಹಾಯಕತೆಯಲ್ಲಿ ನನಗೆ ನೀನು ಬೇಕು ಅನ್ನಿಸುತ್ತಿದೆ.  ಗೊತ್ತಿದ್ದೋ ಗೊತ್ತಿಲ್ಲದೆಯೋ ನಿನ್ನೊಂದಿಗೆ ಆತ್ಮೀಯತೆ ಬೆಳೆದು ಬಿಡ್ತು.  ಸಂಬಂಧಗಳೇ ಬೇಡಾ ಅಂತಿದ್ದು ಎಲ್ಲಾ ಸಂಬಂಧಗಳಿಂದ ದೂರಾಗಿ, ಹೊಸ ಸಂಬಂಧಗಳೆಡೆ ಅಂತಾ ವ್ಯಾಮೋಹವಿಲ್ಲದೇ, ಇದ್ದ ನನಗೆ ನೀನದ್ಯಾವಾಗ ಸಿಕ್ಕುದ್ಯೋ...ಬೇರೆಯವರನ್ನ ನಂಬದೇ ಇದ್ದ ನಾನು, ಅದ್ಯಾಕೆ ನಿನ್ನ ನಂಬಿದೆನೋ ಗೊತ್ತಿಲ್ಲ. ಮತ್ತೆ ನನ್ನ ಕನಸುಗಳೇ ಚಿಗುರುವುದಿಲ್ಲ ಅಂದುಕೊಂಡಿದ್ದ ನನಗೆ ಮತ್ತೆ ಹೊಸ ಕನಸುಗಳೆಡೆ ಕೈಚಾಚುವ ಮಾತು ಇನ್ನು ದೂರವೆ. ಆದರೆ ನಿನ್ನಿಂದ ನನ್ನ ಕನಸುಗಳು ಚಿಗುರುತ್ತಿವೆ...
ಒಮ್ಮೊಮ್ಮೆ ಭಯ ಆದಾಗ ನಿನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದು ಕೂರಬೇಕೆನಿಸುತ್ತೆ. ಪ್ಲೀಸ್ ನಾನು ತುಂಬಾ ದೊಡ್ಡದಾದ ಕೋರಿಕೆಯನ್ನೇನು ನಿನ್ನ ಮುಂದೆ ಸಲ್ಲಿಸುತ್ತಿಲ್ಲ. ಅದಕ್ಕಾಗಿ ಕೋಪ ಮಾಡ್ಕೋಬೇಡ, ನಿಂಗಿಷ್ಟ ಇಲ್ಲ ಅಂದರೆ ನಿನ್ನ ಕೈ ಮುಟ್ಟಲ್ಲ. ನನಗೆ ಯಾವುದರಲ್ಲೂ ನಂಬಿಕೆಯಿಲ್ಲ, ನಿನ್ನ ಬಿಟ್ಟು... ನನಗಿಂತ ಹೆಚ್ಚಾಗಿ ನಾ ನಿನ್ನ ನಂಬ್ತೀನಿ, ಯಾಕೆ ಅಂತ ಗೊತ್ತಿಲ್ಲ...
ಕಣ್ಣುಗಳಲ್ಲಿರುವ ನಿನ್ನ ನೆನಪಾದರೂ ಜೊತೆಗಿರಲಿ ಅನ್ನುವ ಸಣ್ಣ ಆಸೆಯಿಂದ ಕಣ್ಮುಚ್ಚಿ ಕುಳಿತಿದ್ದೀನಿ.. ಕಣ್ಣೀರಿನೊಂದಿಗೆನಿನ್ನ ನೆನಪುಗಳು ಹೊರಹೋಗಬಾರದೆಂದು ಕಣ್ಣೀರನ್ನು ತಡೆಹಿಡಿದು... ಆದರೇ ನನ್ನ ಶಕ್ತಿ ಮೀರಿ ತಡೆಹಿಡಿದರೂ ಕಣ್ಣುಗಳು  ಸೋಲೊಪ್ಪಿಕೊಂಡು ಹನಿಗಳ ರೂಪದಲ್ಲಿ ನನ್ನಿಂದ ಕೆಳಗಿಳಿಯುತ್ತಿವೆ. ಸುತ್ತ ನೋಡಿದರೆ ಕಗ್ಗತ್ತಲು...
ಒಮ್ಮೊಮ್ಮೆ ಹಾಗೆಯೇ ಜೋರಾಗಿ ಅಳಬೇಕು ಅನ್ಸತ್ತೆ... ಆದರೆ ನನ್ನ ಕಣ್ಣೀರು ಬೇರೆಯವ್ರಿಗೆ ಕಾಣಬಾರದು ಅಂತ ಕಷ್ಟಪಟ್ಟು ತಡೆಹಿಡಿಯುತ್ತೇನೆ.  ಆದರೂ ನಿನ್ನ ಮುಂದೆ ಒಮ್ಮೊಮ್ಮೆ ಅಸಹಾಯಕಳಾಗಿ ಕಣ್ಣೀರು ಆಚೆ ಬರುತ್ತೆ... 

Saturday 19 November 2011

ಮನಸಿನಲ್ಲಿ ಏನೇನೋ ಆಸೆ...


ಮನಸಿನಲ್ಲಿ ಏನೇನೋ ಆಸೆ...
ನಿನ್ನ ಗುಂಗುರು ಕೂದಲಲ್ಲಿ ಕೈಯಾಡಿಸುವ ಆಸೆ...
ನಿನ್ನ ಸುಮಧುರ ಸುವಾಸನೆ ಆಸ್ವಾದಿಸುವ ಆಸೆ...
ನಿನ್ನ ಕಣ್ಗಳಲಿ ಕಣ್ಣಿಟ್ಟು ನಿನ್ನೇ ನೋಡುವ ಆಸೆ...
ನಿನ್ನ ಕೈಗಳಲಿ ನನ್ನ ಕೈ ಜೋಡಿಸಿ ಕೂರುವ ಆಸೆ...
ನನ್ನ ತೊಳ್ಗಳಲಿ ನಿನ್ನ ಬಂಧಿಯಾಗಿಸುವ ಆಸೆ...
ನನ್ನ ಹೃದಯದಲಿ ನಿನ್ನ ಪ್ರತಿಬಿಂಬವ ತೋರಿಸುವ ಆಸೆ...
ನಿನ್ನೊಂದಿಗೆ ಸಮುದ್ರ ತೀರದಲಿ ಹುಣ್ಣಿಮೆ ಚಂದ್ರನ ಅಂದವ ಸವಿಯುವ ಆಸೆ...
ನಿನ್ನೊಂದಿಗೆ ಮಂಜಿನ ಇಬ್ಬನಿಯಲಿ ಕೈಜೋಡಿಸಿ ಕೊಂಚ ದೂರ ನಡೆಯುವ ಆಸೆ...
ನಿನ್ನ ಜೊತೆ ನನ್ನ ಹಲವಾರು ಕನಸುಗಳ ಹಂಚಿಕೊಳ್ಳುವ ಆಸೆ...  
ಆ ಕನಸನ್ನು ನನಸು ಮಾಡಿ ತೋರಿಸುವ ಆಸೆ...
ನಾ ಬರೆಯುವ ಎಲ್ಲ ಪದಗಳಲಿ ನಿನ್ನ ಕಾಣುವ ಆಸೆ...
ನೀ ಅದನ್ನು ನನ್ನೊಂದಿಗೆ ಇರುವಾಗ ಓದುವ ಆಸೆ...
ನಿನ್ನ ಜೊತೆ ಒಂದು ಹಗಲಿರುಳು ಕಳೆಯುವಾಸೆ...
ನಿನ್ನ ಜೊತೆ ದಿನ ಹತ್ತು ನಿಮಿಷ ಮಾತಾಡುವ ಆಸೆ...
ಆ ಹತ್ತು ನಿಮಿಷ ಹಾಗೆಯೇ ತಟಸ್ಥವಾಗುವ ಆಸೆ....
ನಿನ್ನ ಮುಗ್ಧ ಮುಖವ ನೋಡುತ ಈ ಜಗವ ಮರೆಯುವ ಆಸೆ...
ನನ್ನ ಹೃದಯ ಬಡಿತದಲ್ಲಿ ನಿನ್ನ ಹೆಸರ ಕೇಳಿಸುವ ಆಸೆ...
ದನ್ನು ಕೇಳುತ ನನ್ನ ಜೀವ ಕಳೆಯುವ ಆಸೆ...